ಭ್ರೂಣದ ತಾರುಮಾರುಗಳು

	ಭ್ರೂಣದ ನೈಸರ್ಗಿಕ ಬೆಳೆವಣಿಗೆಯಲ್ಲಿ ಕಂಡುಬರುವ ವ್ಯತ್ಯಾಸಗಳು (ಫೀಟರ್ ಅಬರೇಷನ್ಸ್). ಭ್ರೂಣದ ತಾರುಮಾರುಗಳು ಪ್ರಮುಖವಾಗಿ ಅಸ್ವಾಭ್ವಾವಿಕ ಜೀನ್ ಹಾಗೂ ವರ್ಣತಂತುಗಳಿಂದಲೂ (ಕ್ರೊಮೊಸೋಮ್ಸ್) ಪಿಂಡಾವಸ್ಥೆಯಲ್ಲಿ ಅದಕ್ಕೆ ಒದಗುವ ಪರಿಸರದ ಬಾಧೆಗಳಿಂದಲೂ ಉಂಟಾಗುತ್ತವೆ.

	ಜೀನ್‍ಮೂಲದ ತಾರುಮಾರುಗಳು: ಮೆದು ಎಲುಬು ರೂಪಗೆಡುವಿಕೆ, ಮೂಳೆಗಂತಿ, ಹಲವು ಬೆರೆಳುಗಳಿರುವಿಕೆ, ಕೂಡು ಬೆರಳಿರುವಿಕೆ, ಹಲವು ವಿಭಾಗಗಳಾಗಿರುವ ಮೂತ್ರಜನಕಾಂಗ ಇವು ಭ್ರೂಣದಲ್ಲಿ ಪ್ರಧಾನ ತಾರುಮಾರುಗಳಾಗಿ ಕಾಣಬಹುದು. ಎಲುಬು ಜೊಳ್ಳಾಗುವಿಕೆ, ಲಾರೆನ್ಸ್‍ಮೂನ್ ಬಿಡಲ್ ಸಿಂಡ್ರೋಮ್ ಎಂದರೆ ಅನುವಂಶಿಕವಾಗಿ ಬಂದ ಬೊಜ್ಜುತನ, ಗಿಡ್ಡತನ, ಬುದ್ಧಿಮಾಂದ್ಯ, ಜನನಗ್ರಂಥಿಯ ಕೊರತೆ, ಇವು ಸುಪ್ತ ಗುಣಗಳಾಗಿ ತೋರಬಹುದು. ಕಿವುಡು, ಕಣ್ಗುಡ್ಡೆ ಮಬ್ಬು, ಕಿರುದಲೆ, ನೀರ್ದಲೆ, ಕಿರುಗಣ್ಣು, ಕಣ್ಣುಪೊರೆ ಇವು ಲಿಂಗ ಸಂಬಂಧದ ಸುಪ್ತ ಗುಣಗಳಾಗಿ ಕಾಣಬಹುದು. ಹಲವುಬೆರಳುಗಳು, ಅವಳಿ ಬೆರಳುಗಳು ರೇಡಿಯಸ್ ಮೂಳೆ ಇಲ್ಲದಿರುವಿಕೆ ಇವು ಸ್ವಾಯತ್ತ ಪ್ರಧಾನಗುಣಗಳಾಗಿ ಕಾಣುವುದು ಸಾಧ್ಯ. ಸೀಳದ ತುಟಿ, ಲಟ್ಟಗಾಲು, ಸೊಂಟದ ಕೀಲು ತಪ್ಪಿಕೆ, ಮಿದುಳಿಲ್ಲದಿರುವಿಕೆ, ಕೆಳಹರುಕು ಇವು ಕೂಡ ಜೀನ್ ಮೂಲದ ತಾರುಮಾರುಗಳು.

	ಕ್ರೋಮೊಸೋಮ್‍ಮೂಲದ ತಾರುಮಾರುಗಳು: ಮಾಮೂಲಾಗಿ ಮಾನವನಲ್ಲಿ 46 ವರ್ಣತಂತುಗಳಿರುತ್ತವೆ. ಇವುಗಳ ಸಂಖ್ಯೆ ಹೆಚ್ಚು ಕಡಿಮೆ ಆದಾಗ ಇವುಗಳಲ್ಲಿರುವ ಜೀನ್‍ಗಳ ಸ್ಥಾನಗಳು ಬದಲಾಗಿ ಭ್ರೂಣದ ತಾರುಮಾರುಗಳು ಗೋಚರಿಸುತ್ತವೆ. ಡೌನನ ಸಿಂಡ್ರೋಮಿನಲ್ಲಿ 47 ವರ್ಣತಂತುಗಳಿರುತ್ತವೆ. ಇದು ಒಂದು ವರ್ಣತಂತುವಿನ ಬೇರ್ಪಡಿಕೆಯಲ್ಲಿ ಅವ್ಯವಸ್ಥೆಯಿಂದ ಹೆಚ್ಚಿಗೆಯಾಗಿ ಉಂಟಾದುದು. ಸ್ಥಾನ ಬದಲಿಕೆಯಿಂದಲೂ ಈ ತಾರುಮಾರು ಕಾಣಬಹುದು. ಲೈಂಗಿಕ ವರ್ಣತಂತುಗಳಲ್ಲಿ ಘಿಔ ಜೋಡಣೆಯಿದ್ದು ವರ್ಣತಂತುಗಳ ಸಂಖ್ಯೆ 45 ಇರುವಾಗ ಜನನಾಂಗಗಳ ಬಲ ಕುಗ್ಗಬಹುದು, ಭ್ರೂಣದ ಹೊರಜನನಾಂಗ ಗಂಡೂ ವರ್ಣಕಾಯದ ಲಿಂಗ ಹೆಣ್ಣೂ ಆಗಿರುತ್ತವೆ. ಕ್ಲೈನ್ ಫೆಲ್ಟರ್ಸನ ಸಿಂಡ್ರೋಮಿನಲ್ಲಿ (ಜನನಗ್ರಂಥಿಯ ಕೊರತೆ, ವೃಷಣದ ಕೊರತೆ, ಗಂಡುಜನಕ ಹಾರ್ಮೋನಿನ ಕೊರತೆ, ವೀರ್ಯಾಣುಗಳಿಲ್ಲದಿರುವಿಕೆ, ಬುದ್ಧಿಮಾಂದ್ಯ) ಒಂದು ಲೈಂಗಿಕ ವರ್ಣತಂತು ಹೆಚ್ಚಿದ್ದು ಒಟ್ಟು 47 ವರ್ಣತಂತುಗಳು ಇರುತ್ತವೆ. ಭ್ರೂಣದ ಲಿಂಗ ಗುಂಡಾಗಿರುತ್ತದೆ. ಕೆಲವು ಭ್ರೂಣಗಳಲ್ಲಿ ಒಂದರಿಂದ ಮೂರರಷ್ಟು ಹೆಚ್ಚು ಘಿ ವರ್ಣತಂತುಗಳಿರಬಹುದು. ಇದರಲ್ಲಿ ಙ ವರ್ಣತಂತು ಇರಬಹುದು, ಇಲ್ಲದೆಯೂ ಇರಬಹುದು. 

	ನೀರುಲ್ಬ ಅಥವಾ ಉಲ್ಬದ್ರವ ಕಡಿಮೆ ಇರುವಿಕೆಯೂ ಭ್ರೂಣದ ತಾರುಮಾರುಗಳಿಗೆ ಮೂಲವಾಗಬಹುದು. ನೀರುಲ್ಬದಲ್ಲಿ ಭ್ರೂಣಕ್ಕೆ ವಿದುಳಿಲ್ಲದಿರಬಹುದು, ಬೆನ್ನುಕಂಬದಲ್ಲಿ ಸೀಳಿರಬಹುದು. ಮೂತ್ರಕೋಶ ಹೊರಗೆ ಮಗುಚಿಕೊಂಡಿರಬಹುದು, ಶ್ವಾಸನಾಳ ಮತ್ತು ಅನ್ನನಾಳದ ಮಧ್ಯೆ ತೂತಿರಬಹುದು. ಜಠರದ ಬಳಿಯ ಸ್ನಾಯು ಬಲವತ್ತವಾಗಿಸಬಹುದು. ಉಲ್ಬದ್ರವ ಕಡಿಮೆಯಿದ್ದರೆ ಮೂತ್ರನಾಳ ಅಥವಾ ಮೂತ್ರಜನಕಾಂಗವೇ ಇಲ್ಲದಿರಬಹುದು. ಇದು ಸಾಮಾನ್ಯವಾಗಿ ಮಗುವಿನ ಸಾವಿಗೆ ಕಾರಣವಾಗುತ್ತದೆ.

	ಪರಿಸರಮೂಲದ ತಾರುಮಾರುಗಳು: ಪ್ರಮುಖವಾಗಿ ಗರ್ಭಧಾರಣೆಯಾಗಿ ಮೊದಲ ಮೂರು ತಿಂಗಳಲ್ಲಿ ಉಂಟಾಗುವಂಥವು ಭ್ರೂಣದ ಮೇಲೆ ತುಂಬ ಅಪಾಯ ಉಂಟುಮಾಡುತ್ತವೆ. ಗರ್ಭಿಣಿ ಸೇವಿಸುವ ಔಷಧಿಗಳು, ವಿಕಿರಣ ಚಿಕಿತ್ಸೆ ಅಥವಾ ಅರಿವಳಿಕೆಗೆ ಒಳಗಾಗುವ ಸನ್ನಿವೇಶ ಇಂಥದೇ ಪರಿಣಾಮ ಬೀರಬಹುದು. ಸಿಹಿಮೂತ್ರರೋಗದಂಥ ಸೋಂಕಿಲ್ಲದ ಕಾಯಿಲೆಗಳೂ ಅಷ್ಟೆ.

	ಗರ್ಭಿಣಿಗೆ ರೂಬೆಲ್ಲಾ ಸೂಕ್ಷ್ಮಾಣುವಿನ ಸೋಂಕಾದರೆ ಭ್ರೂಣದ ಹೃದಯ, ಕಣ್ಣು ಮತ್ತು ಹಲ್ಲುಗಳಲ್ಲಿ ವ್ಯತ್ಯಯ ಆಗಬಹುದು. ಕಿವುಡು, ಬುದ್ಧಿಮಾಂದ್ಯವೂ ಉಂಟಾಗಬಹುದು. ಸೈಟೊಮೆಗಲೊ ಸೂಕ್ಷ್ಮಾಣುವಿನಿಂದ ಭ್ರೂಣದ ಮಿದುಳು ಸೋಂಕಾದರೆ ಬುದ್ಧಿಮಾಂದ್ಯ, ಕಣ್‍ಜಾಲ ಉರಿತ, ನೀರ್ದಲೆ, ಮಿದುಳು ಸುಣ್ಣಗಟ್ಟುವಿಕೆ ಮುಂತಾದವು ಕಾಣಿಸಿಕೊಳ್ಳುತ್ತವೆ. ಟಾಕ್ಸೊಪ್ಲಾಸ್ ಮೋಸಿನ್ ಸೋಂಕು ನೀರ್ದಲೆ, ಕಣ್ಣುದೋಷ, ಕಿರುದಲೆ, ಕಣ್‍ಜಾಲ ಉರಿತ ಮತ್ತು ಬುದ್ಧಿಮಾಂದ್ಯ ಮೂಡಿಸುವುದು. ಮಲೇರಿಯಾ, ಸೀತಾಳೆ ಸಿಡುಬು, ಹರ್ಪಿಸ್ ರೋಗಗಳು ಕಿರುದಲೆ, ನೀರ್ದಲೆಗಳಿಗೆ ಕಾರಣವಾಗಬಹುದು. ಪಿತ್ತಕೋಶದ ಉರಿತ ನೀರ್ದಲೆ, ಮಂಗೋಲಿಸಮುಗಳನ್ನು ಹುಟ್ಟಿಸಬಹುದು. ಸೂಕ್ಷ್ಮಾಣು ಮತ್ತು ವರ್ಣತಂತುಗಳ ನಡುವಣ ತಿಕ್ಕಾಟದಿಂದ ಲ್ಯುಕಿಮಿಯಾ, ಮಂಗೋಲಿಸಮ್ ಮತ್ತಿತರ ತಾರುಮಾರು ಕಾಣಿಸಿಕೊಳ್ಳುವುದು ಸಾಧ್ಯ.

	ಗರ್ಭಿಣಿ ಸಿಹಿಮೂತ್ರರೋಗದಿಂದ ನರಳುತ್ತಿದ್ದರೆ ಭ್ರೂಣದ ತೂಕ ಜಾಸ್ತಿ ಆಗುತ್ತದೆ. ಭ್ರೂಣದ ಸೊಂಟ ಅಥವಾ ತೊಡೆಮೂಳೆಗಳ ತಾರುಮಾರು ಇರಬಹುದು. ಗರ್ಭಿಣಿಯ ನಂಜುಬೇನೆ, ಥೈರಾಯಿಡ್ ಗ್ರಂಥಿಯ ಕೊರತೆ, ಫಿನೈಲ್ ಕಿಟೊನ್ಯೂರಿಯಾ ಕಾಯಿಲೆಗಳಲ್ಲಿಯೂ ಭ್ರೂಣದ ತಾರುಮಾರು ಕಾಣುತ್ತದೆ. ಗರ್ಭಿಣಿಗೆ ಪೌಷ್ಟಿಕ ಆಹಾರದ ಕೊರತೆಯಾದಾಗ ಭ್ರೂಣದ ಮಿದುಳಿನ ತೂಕ ಕಡಿಮೆಯಾಗುತ್ತದೆ. ಮೆದುಮೂಳೆರೋಗವೂ ಉಂಟಾಗಬಹುದು. ಮಿದುಳಿನ ಕೋಶಗಳ ಸಂಖ್ಯೆ ಕಡಿಮೆಯಾಗುವುದರಿಂದ ಬುದ್ಧಿಮಾಂದ್ಯಕ್ಕೆ ಮೂಲವಾಗುತ್ತದೆ.

	ಗರ್ಭಿಣಿ ಸೇವಿಸುವ ಕೆಲವು ಔಷಧಿಗಳು ಭ್ರೂಣದ ಮೇಲೆ ಪ್ರತಿಕೂಲ ಪರಿಣಾಮಬೀರುತ್ತವೆ. ಅದರಿಂದ ತೀರ ಅಗತ್ಯವಿದ್ದ ಹೊರತು ಗರ್ಭಿಣಿಗೆ ಔಷಧಗಳನ್ನು ಕೊಡಬಾರದು.

	ತಾಯಿಯ ರಕ್ತ Rh ನೆಗೆಟಿವ್ ಗುಂಪಿಗೆ ಸೇರಿದ್ದು ಭ್ರೂಣದ ರಕ್ತ ಖh ಪಾಸಿಟಿವ್ ಆಗಿದ್ದರೆ ಪ್ರತಿರೋಧಜನಕ ವಸ್ತುಗಳು ತಾಯಿಯಲ್ಲಿ ಉದ್ಭವಿಸುವ ಸಾಧ್ಯತೆ ಇದೆ. ಹೀಗಾದಾಗ ಭ್ರೂಣದ ರಕ್ತಕಣಗಳೆಲ್ಲ ನಾಶವಾಗಬಹುದು. ತೀವ್ರ ಸ್ವರೂಪದ ನಾಶವಾದರೆ ಇದಕ್ಕೆ ಎರಿಥ್ರೊ ಬ್ಲಾಸ್ಟೋಸಿಸ್ ಫಿಟಾಲಿಸ್ ಎನ್ನುತ್ತಾರೆ. ಹೀಗಾದ ಭ್ರೂಣ ಉಳಿಯುವುದು ಕಷ್ಟ. ತಾಯಿಗೆ ಜಾಸ್ತಿ ವಯಸ್ಸಾಗಿದ್ದರೆ ಭ್ರೂಣದಲ್ಲಿ ಮಂಗೋಲಿಸಮ್ ಸಾಮಾನ್ಯ, ತಂದೆಗೆ ವಯಸ್ಸಾಗಿದ್ದರೆ ಮೆದುಮೂಳೆ ರೂಪಗೆಡುತ್ತದೆ. 

	ತಾರುಮಾರು ಪತ್ತೆ: ಭ್ರೂಣವನ್ನು ಸುತ್ತುವರಿದಿರುವ ಉಲ್ಬಜಲ ಹೊರ ತೆಗೆದು ಪರೀಕ್ಷೆ ಮಾಡುವುದರಿಂದ, ಭ್ರೂಣದ ತಾರುಮಾರುಗಳನ್ನು ಪತ್ತೆಹಚ್ಚಬಹುದು. ಇದನ್ನು ಗರ್ಭಧಾರಣೆಯಾದ ಸುಮಾರು 14 ವಾರಗಳಾದ ಬಳಿಕ ಮಾಡಬೇಕು. ಉಲ್ಬದ್ರವದ ಕೋಶಗಳನ್ನು ಬಣ್ಣಗಟ್ಟಿಸುವುದರ ಮತ್ತು ತಳಿಯೆಬ್ಬಿಸುವುದರ ಮೂಲಕ ಜೀನ್, ವರ್ಣತಂತು ಹಾಗೂ ಕಿಣ್ವಗಳ ತಾರುಮಾರುಗಳನ್ನು ಕಂಡುಹಿಡಿಯಬಹುದು. ಭ್ರೂಣ ಊನವಾಗಿದೆ ಎಂದು ಗೊತ್ತಾದರೆ ಅದನ್ನು ಮೊದಲೇ ತೆಗೆಸುವುದು ಸಾಧ್ಯ. ಎರಿಥ್ರೊಬ್ಲಾಸ್ಟೋಸಿಸ್ ಫಿಟಾಲಿಸ್ ಕಾಯಿಲೆಯಲ್ಲಿ ಭ್ರೂಣದ ಸ್ಥಿತಿ ನಿರ್ಧರಿಸಲು ಮತ್ತು ಚಿಕಿತ್ಸೆ ನೀಡಲು ಉಲ್ಬಜಲ ಪರೀಕ್ಷೆ ಬಲು ಸಹಾಯಕ. ಈ ಹಂತದಲ್ಲಿ ವಿಶದ ಸ್ಕ್ಯಾನಿಂಗ್ ಪರೀಕ್ಷೆಯು ತನ್ನ ಕಾಣಿಕೆಯನ್ನು ಅಪರಿಮಿತವಾಗಿ ಕೊಟ್ಟಿದೆ.		
(ಎ. ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ